ಮೆಸ್ಯೇ, ಚಾಲ್ರ್ಸ್  
1730--1817. ಫ್ರೆಂಚ್ ಖಗೋಳವಿಜ್ಞಾನಿ. ಜನನ 26 ಜನವರಿ 1720.  ಮರಣ 11 ಏಪ್ರಿಲ್ 1817. ಧೂಮಕೇತು ಅನ್ವೇಷಣೆ ಇವನ ಗೀಳು. ನಕ್ಷತ್ರಪಟದ ಮೇಲೆ ಅಕಸ್ಮಾತ್ತಾಗಿ ಪ್ರಕಟವಾಗುತ್ತಿದ್ದ ಗೊಂಡೆಮಂಡೆಯ ಧೂಮಬಾಲದ ಈ ಅಜ್ಞಾತಕಾಯಗಳನ್ನು ಮೊತ್ತ ಮೊದಲು ಗುರುತಿಸಿ ದಾಖಲಿಸುವುದರಲ್ಲಿ ಇವನಿಗೆ ಅಪಾರಾಸಕ್ತಿ. ದೂರದರ್ಶಕದ ನೆರವಿನಿಂದ ಆಕಾಶದ ವಿವಿಧ ವಲಯಗಳಲ್ಲಿ ಕ್ರಮಬದ್ಧವಾಗಿ ನಡೆಸುತ್ತಿದ್ದ ಈ ಅನ್ವೇಷಣೆಯ ವೇಳೆ ಅಲ್ಲಲ್ಲಿ ಎದುರಾಗುತ್ತಿದ್ದ ನೀಹಾರಿಕೆಗಳು (ನೆಬ್ಯುಲೇ) ವೃಥಾ ಗೊಂದಲಕ್ಕೆ ಕಾರಣವಾಗುತ್ತಿದ್ದುವು.  ನೀಹಾರಿಕೆಗಳ ಗೋಜಲಿನಿಂದ ಮತ್ತು ಕ್ಷೀಣನಕ್ಷತ್ರಗಳ ಕ್ರಮರಹಿತ ಎರಚಿಕೆಯಿಂದ-ಇವೆಲ್ಲವೂ ಸಾಪೇಕ್ಷವಾಗಿ ಸ್ಥಿರವಾಗಿರುವುವು-ಧೂಮಕೇತುವಿನ ಚಂಚಲಾಕೃತಿಯನ್ನು ಬೇರ್ಪಡಿಸಿ ಗುರುತಿಸಲು ಇದ್ದ ಉಪಾಯ ಒಂದೇ; ಸ್ಥಿರ ನೀಹಾರಿಕೆಗಳ ಯಾದಿ ತಯಾರಿಕೆ. ಇದನ್ನು ಮೆಸ್ಯೇ 1781ರಲ್ಲಿ ಪೂರೈಸಿದ. ಇದೇ ಪ್ರಪಂಚಪ್ರಸಿದ್ಧ ಮೆಸ್ಯೇ ಯಾದಿ (ಮೆಸ್ಯೇ ಕ್ಯಾಟಲಾಗ್).  ಸುಮಾರು ಒಂದು ನೂರು ಸ್ಥಿರನೀಹಾರಿಕೆಗಳ ಕರಾರು ವಾಕ್ಕು ನೆಲೆಗಳನ್ನು ಒಳಗೊಂಡಿರುವ ಈ ಯಾದಿ ಖಗೋಳವಿಜ್ಞಾನದ ಪ್ರಗತಿಯಲ್ಲಿ ಮಹತ್ತ್ವದ ಪಾತ್ರವಹಿಸಿದೆ.        

		ಈ ಯಾದಿ ಚಾಲ್ತಿಗೆ ಬಂದ ಬಳಿಕ ಆಕಾಶದಲ್ಲಿ ಯಾವ ನೂತನ ಧೂಮಕೇತು ಸದೃಶಕಾಯ ಪ್ರಕಟವಾದರೂ ಅದನ್ನು ಇದರೊಂದಿಗೆ ಹೋಲಿಸಿ ಅದರ ಗುರುತು ಮತ್ತು ನೆಲೆ ನಿರ್ಧರಿಸುವುದು ಕ್ರಮವಾಯಿತು.  ಮೆಸ್ಯೇ ಯಾದಿಯಲ್ಲಿ ದಾಖಲಾಗಿರುವ ಸ್ಥಿರಕಾಯಗಳಿಗೆ ಒ1 (ಮೆಸ್ಯೇ 1). ಒ2 ಎಂದು ಮುಂತಾಗಿ ನಾಮಕರಣ ಮಾಡಲಾಗಿದೆ. ಇವೆಲ್ಲವೂ ನೀಹಾರಿಕೆಗಳೇ ಆಗಿರಬೇಕಾಗಿಲ್ಲ. ತಾರಾಗುಚ್ಛಗಳೂ ಬ್ರಹ್ಮಾಂಡಗಳೂ ಇವುಗಳಲ್ಲಿ ಸೇರಿವೆ.  ಅಂದಿನ ದುರ್ಬಲ ದೂರದರ್ಶಕಗಳು ಇವುಗಳಲ್ಲಿಯ ವಿವಿಕ್ತ ತಾರೆಗಳನ್ನು ಬೇರ್ಪಡಿಸಿ ತೋರಿಸಲು ಸಮರ್ಥವಾಗಿರದಿದ್ದುದೇ ಇದರ ಕಾರಣ. ಉದಾಹರಣೆಗೆ ಒ13.  ಇದು ನೀಹಾರಿಕೆ ಅಲ್ಲ; ಹಲವು ಕೋಟಿ ನಕ್ಷತ್ರಗಳ ಗುಚ್ಛ.  ಭೀಮಪುಂಜದಲ್ಲಿರುವುದರಿಂದ (ಹಕ್ರ್ಯುಲಸ್ ಕಾನ್‍ಸ್ಟೆಲ್ಲೇಷನ್) ಇದಕ್ಕೆ ಮಹಾಭೀಮ ತಾರಾಗುಚ್ಛ (ಗ್ರೇಟ್ ಹಕ್ರ್ಯುಲಸ್ ಕ್ಲಸ್ಟರ್) ಎಂಬ ಹೆಸರಿದೆ. ನಮ್ಮ ಬ್ರಹ್ಮಾಂಡವಾದ (ಗ್ಯೆಲಾಕ್ಸಿ) ಆಕಾಶಗಂಗೆಯಲ್ಲಿಯೇ ಸುಮಾರು ನೂರು ಇಂಥ ಪ್ರಕಾಶಮಾನವಾದ ಗುಚ್ಛಗಳಿವೆ.  ಇವೆಲ್ಲವನ್ನೂ ಆವಿಷ್ಕರಿಸಿದಾತ ಮೆಸ್ಯೇ.  ಮುಂದೆ ಹರ್ಷಲ್ (1738-1822) ಇವನ್ನು ವಿಘಟಿಸಿ (ರಿಸಾಲ್ವ್) ವಿವಿಕ್ತ ತಾರೆಗಳನ್ನು ತೋರಿಸಿ ಕೊಟ್ಟ. ಈ ಗುಚ್ಛಗಳ ಆಧಾರದಿಂದ ಸುಮಾರು ಒಂದು ಶತಮಾನಾನಂತರ ಶ್ಯಾಪ್ಲೇ (1915--20 ಅವಧಿಯಲ್ಲಿ) ವೀಕ್ಷಣೆ ಮಾಡಿ ಆಕಾಶಗಂಗೆಯ ನಿಜಗಾತ್ರ ನಿರ್ಧರಿಸಿದ.  ಮೆಸ್ಯೇ ಯಾದಿಯಲ್ಲಿರುವ ಇತರ ಕೆಲವು ಕಾಯಗಳು ಆಕಾಶಗಂಗೆಯಷ್ಟು ಅಥವಾ ಅದಕ್ಕಿಂತ ಹಿರಿಯ ಗಾತ್ರದವು ಎಂದು ಈಗ ತಿಳಿದಿದೆ.  ಉದಾಹರಣೆಗೆ ಒ31 ಎಂಬುದು ಸುಮಾರು ಒಂದೂವರೆ ಶತಮಾನಾನಂತರ ಹಬ್ಬಲ್‍ನಿಂದ ವಿಘಟಿಸಲ್ಪಟ್ಟು ಒಂದು ಬ್ರಹ್ಮಾಂಡವೆಂದು ಪ್ರಕಟವಾಯಿತು. ಇದೇ ಮಹಾದ್ರೌಪದೀ ಬ್ರಹ್ಮಾಂಡ (ಗ್ರೇಟ್ ಆ್ಯಂಡ್ರೊಮೀಡ ಗ್ಯೆಲಾಕ್ಸಿ).          

	ಧೂಮಕೇತುಶೋಧಕನಾಗಿ ಮೆಸ್ಯೇ 21 ಧೂಮಕೇತುಗಳನ್ನು ಆವಿಷ್ಕರಿಸಿದ್ದಾನೆ. ಆದರೆ ಇವೆಲ್ಲವೂ ತೀರ ಕ್ಷುದ್ರಕಾಯಗಳು, ಮೆಸ್ಯೇ ಹೆಸರಿಗೆ-ಉದಾಹರಣೆ ಹ್ಯಾಲೀ ಧೂಮಕೇತು ಹ್ಯಾಲೀಯ ಹೆಸರಿಗೆ ತಂದಂತೆ-ಖ್ಯಾತಿತರಲಿಲ್ಲ.

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ